ಕಯಥ : ಮಧ್ಯಪ್ರದೇಶ ರಾಜ್ಯದ ಉಜ್ಜಯನಿ ಜಿಲ್ಲೆಯಲ್ಲಿ ಉಜ್ಜಯನಿಯಿಂದ ಸು. 25 ಕಿಮೀ ಪುರ್ವಕ್ಕೆ ಛೋಟಿ ಕಾಲಿಸಿಂಧ್ ನದಿಯ ಬಲದಂಡೆಯಲ್ಲಿರುವ ಪ್ರಾಗೈತಿಹಾಸಿಕ ನೆಲೆ. ಈಗಿರುವ ಹಳ್ಳಿ ಪುರಾತನ ಅವಶೇಷಗಳ ದಿಬ್ಬದ ಮೇಲೆಯೇ ಇದೆ. ಪ್ರಖ್ಯಾತ ಖಗೋಳವಿಜ್ಞಾನಿ ವರಾಹಮಿಹಿರನ ಹುಟ್ಟೂರಾದ ಕಪಿಥಕ ಇದೇ ಸ್ಥಳವೆಂದು ಹೇಳುತ್ತಾರೆ. 1964-65 ರಲ್ಲಿ ವಿಕ್ರಮ್ ವಿಶ್ವವಿದ್ಯಾಲಯದ ವಿ.ಎಸ್. ವಾಕಣಕರ್ ಈ ನಿವೇಶನವನ್ನು ಶೋಧಿಸಿ 1965-67ರಲ್ಲಿ ಸಣ್ಣ ಪ್ರಮಾಣದ ಉತ್ಖನನವನ್ನು ನಡೆಸಿದರು. ಅನಂತರ ಡೆಕ್ಕನ್ ಕಾಲೇಜ್, ವಿಕ್ರಮ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 1968ರಲ್ಲಿ ಉತ್ಖನನ ನಡೆಸಿ ಐದು ಸಾಂಸ್ಕೃತಿಕ ಹಂತಗಳನ್ನು ಗುರುತಿಸಿತು. 
ಮೊದಲನೆಯ ಹಂತವಾದ ತಾಮ್ರ-ಶಿಲಾಯುಗದ ಸಾಂಸ್ಕೃತಿಕ ಅವಶೇಷಗಳು ಭಾರತೀಯ ಉಪಖಂಡದ ಇತರ ತಾಮ್ರ-ಶಿಲಾಯುಗ ಸಂಸ್ಕೃತಿಗಳಿಗಿಂತ ಭಿನ್ನವಾಗಿವೆ. ಮೂರು ವಿಧದ ಮಣ್ಪಾತ್ರೆಗಳು ಈ ಸಂಸ್ಕೃತಿಯ ಮುಖ್ಯ ಲಕ್ಷಣವಾಗಿವೆ. ತಾಮ್ರದ ಉಪಕರಣಗಳು ಹಾಗೂ ಬೆಣಚುಕಲ್ಲಿನ ನೀಳ ಚಕ್ಕೆಗಳು ಇತರ ತಾಮ್ರ-ಶಿಲಾಯುಗ ಸಂಸ್ಕೃತಿಗಳಲ್ಲಿರುವಂತಿವೆ. ಇಲ್ಲಿಯ ಜನರು ಮಣ್ಣು ಮತ್ತು ಹುಲ್ಲಿನ ಸಣ್ಣ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಮಣ್ಪಾತ್ರೆಗಳಲ್ಲಿ ಒಂದು ಅತಿ ವಿಶಿಷ್ಟವಾಗಿದೆ. ನಯವಾಗಿ ಗಟ್ಟಿಮುಟ್ಟಾಗಿಯೂ ಇರುವ ಈ ಪಾತ್ರೆಗಳು ದಪ್ಪ ಕಂದುಬಣ್ಣದ ಲೇಪನವನ್ನು ಅಂಚಿನಿಂದ ಭುಜದವರೆಗೂ ಕೆಲವೊಮ್ಮೆ ತಳಭಾಗದವರೆಗೂ ಹೊಂದಿವೆ. ಲೇಪನದ ಮೇಲೆ ನೇರಳೆ ವರ್ಣದ ವಿವಿಧಾಕೃತಿಯ ವಕ್ರವಾದ, ನೀಳವಾದ ಹಾಗೂ ಏರಿಳಿತಗಳಿಂದ ಕೂಡಿದ ದಪ್ಪವಾದ ಚಿತ್ರಗಳನ್ನು ಬಿಡಿಸಲಾಗಿದೆ. ದುಂಡಾದ ಜಾಡಿಗಳು ಹಾಗೂ ದಪ್ಪ ಬಟ್ಟಲುಗಳು ವಿಶೇಷವಾಗಿವೆ. ಹರಪ್ಪ ಸಂಸ್ಕೃತಿಯ ಮಡಕೆಯನ್ನು ಹೋಲುವ ದೊಡ್ಡ ಶೇಖರಣಾ ಜಾಡಿಗಳು ಇವೆ. ಎರಡನೆಯ ಮಾದರಿಯ ಮಣ್ಪಾತ್ರೆಗಳು ಮಾಸಲು ಕಂದುಬಣ್ಣದ ಮೇಲೆ ಕೆಂಪುವರ್ಣದಿಂದ ಅಲಂಕರಿಸಲ್ಪಟ್ಟಿವೆ. ಇವು ನಯವಾಗಿ ತೆಳುವಾಗಿ ಇವೆ. ಇವುಗಳಲ್ಲಿ ಚೆಂಬು ಸರ್ವೇಸಾಮಾನ್ಯವಾಗಿದ್ದು ತಟ್ಟೆ ಹಾಗೂ ನೀಳ್ಗತ್ತಿನ ದುಂಡನೆಯ ಜಾಡಿಗಳು ಪ್ರಮುಖವಾಗಿವೆ. ಮೂರನೆಯ ಮಾದರಿಯ ಮಣ್ಪಾತ್ರೆಗಳನ್ನು ಲೇಪನ ಮಾಡದೆಯೇ ಅಂಕುಡೊಂಕಾದ ಕೊರೆದ ಚಿತ್ರಗಳಿಂದ ಚಿತ್ರಿಸಲಾಗಿದೆ. ಇವುಗಳಲ್ಲಿ ಬಟ್ಟಲು ಹಾಗೂ ಪಾತ್ರೆಗಳು ಪ್ರಮುಖ ಮಾದರಿಗಳು. ಈ ಮಣ್ಪಾತ್ರೆಗಳ ಜೊತೆಗೆ ಕೈಯಿಂದ ಮಾಡಿದ ಒರಟಾದ ಕೆಂಪು-ಬೂದು ಬಣ್ಣದ, ಕೆಲವೊಮ್ಮೆ ಕೊರೆದ ಚಿತ್ರಗಳಿಂದ ಚಿತ್ರಿಸಲ್ಪಟ್ಟ ಪಾತ್ರೆಗಳು, ಶೇಖರಣಾ ಜಾಡಿಗಳು, ಬೋಗುಣಿ, ಹರಿವಾಣ ದೊರೆತಿವೆ. ಇತರ ತಾಮ್ರ-ಶಿಲಾಯುಗ ಸಂಸ್ಕೃತಿಗಳ ಮಣ್ಪಾತ್ರೆಗಳಿಗಿಂತ ಭಿನ್ನವಾದ ಇವು ಪ್ರಥಮ ಬಾರಿಗೆ ಈ ನೆಲೆಯಲ್ಲಿ ಕಂಡುಬಂದಿರುವುದರಿಂದ ಈ ಹಂತದ ಸಂಸ್ಕೃತಿಯನ್ನು ಕಯಥ ಸಂಸ್ಕೃತಿಯೆಂದು ಉತ್ಖನನಕಾರರು ಹೆಸರಿಸಿದ್ದಾರೆ.

ಕಯಥ ಸಂಸ್ಕೃತಿಯ ಜನರು ತಾಮ್ರ ಲೋಹ ತಂತ್ರಗಾರಿಕೆಯಲ್ಲಿ ನಿಪುಣರಾಗಿದ್ದರು. ಇಲ್ಲಿ ದೊರೆತ ತಾಮ್ರದ ಎರಡು ಕೊಡಲಿ ಮತ್ತು 28 ಬಳೆಗಳು ಇವರ ನೈಪುಣ್ಯಕ್ಕೆ ಸಾಕ್ಷಿಯಾಗಿವೆ. 160-175 ಮಂದಗೆಂಪಿನ ಕಲ್ಲು ಹಾಗೂ ಅಗೇಟ್ ಮಣಿಗಳಿಂದ ಮಾಡಿದ ಎರಡು ಕೊರಳ ಹಾರಗಳು ಹಾಗೂ ಸ್ಟಿಯಟೈಟ್ನಲ್ಲಿ ಮಾಡಿದ 40,000 ಸೂಕ್ಷ್ಮಮಣಿಗಳು ದೊರೆತಿವೆ. ಕಯಥ ಸಂಸ್ಕೃತಿ ಮರೆಯಾದ ಒಂದು ಶತಮಾನದ ಅನಂತರ (ಪ್ರ.ಶ.ಪು. 1800) ಈ ನೆಲೆಯಲ್ಲಿ ಬಾಣಾಸ್ ಸಂಸ್ಕೃತಿಯ ಜನ ಬಂದು ನೆಲೆಸಿದರು. 

ಬಾಣಾಸ್ ಸಂಸ್ಕೃತಿ ತಾಮ್ರಯುಗ ಸಂಸ್ಕೃತಿಯಾದರೆ ಕಯಥ ಕಲ್ಲಿನ ಚಕ್ಕೆಯ ಅಲಗುಗಳ ಬಳಕೆಯಿಂದಾಗಿ ತಾಮ್ರ-ಶಿಲಾಯುಗ ಸಂಸ್ಕೃತಿಯಾಗಿದೆ. ಬಾಣಾಸ್ ಸಂಸ್ಕೃತಿಯ ಸುಡಾವೆ ಮಣ್ಣಿನ ಗೂಳಿಯ ನೈಜತೆ ಹಾಗೂ ಅಂಗಾಂಗಗಳ ವಿಶಿಷ್ಟ ನಿಲುವು ಆಕರ್ಷಕವಾಗಿದೆ. ಬಹುತೇಕ ಆಕೃತಿಗಳಲ್ಲಿ ತಲೆ, ಕೊಂಬು, ಹಾಗೂ ಇಣಿ ಮಾತ್ರ ಎದ್ದು ಕಾಣುವಂತೆ ರೂಪಿಸಿ ಇವುಗಳಿಗೆ ವೃತ್ತಾಕಾರದ ಪೀಠವನ್ನು ಒದಗಿಸಲಾಗಿದೆ. ಕೆಲವು ಆಕೃತಿಗಳ ಕೊಂಬುಗಳನ್ನು ಮಾತ್ರ ಪೀಠದ ಮೇಲೆ ತೋರಿಸಲಾಗಿದೆ. ಇವುಗಳನ್ನು ಪುಜೆಗಾಗಿ ಉಪಯೋಗಿಸುತ್ತಿದ್ದಿರಬಹುದು. ಇಂತಹ ಮಾದರಿಗಳು ಇಲ್ಲಿಯವರೆಗೂ ಬೇರೆ ಎಲ್ಲಿಯೂ ದೊರೆತಿಲ್ಲ. 

ಮೂರನೆಯ ಹಂತದಲ್ಲಿ ಬಾಣಾಸ್ ಸಂಸ್ಕೃತಿ ಮಾಳ್ವ ಸಂಸ್ಕೃತಿಯೊಂದಿಗೆ ಮಿಶ್ರಗೊಳ್ಳು ತ್ತದೆ. ಮಾಳ್ವ ಸಂಸ್ಕೃತಿಯ ವಿಶಿಷ್ಟವಾದ ಮಣ್ಪಾತ್ರೆ ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟಿದೆ. ಇವುಗಳ ಜೊತೆಗೆ ಬಿಳಿಯ ಚಿತ್ರಗಳಿಂದ ಅಲಂಕೃತವಾದ ಕಪ್ಪು-ಕೆಂಪು ದ್ವಿವರ್ಣ ಮಡಕೆಗಳು ದೊರೆತಿದ್ದು ಇವು ಬಾಣಾಸ್ ಸಂಸ್ಕೃತಿಯ ಉಳಿಕೆಗಳು. ಕೈಯಿಂದ ಮಾಡಿದ ಒರಟಾದ ಮಡಕೆಗಳೂ ಹಿಂದಿನ ಸಂಸ್ಕೃತಿಯಿಂದ ಮುಂದುವರೆದಿವೆ. ಸುಟ್ಟಮಣ್ಣಿನ ಗೂಳಿಯ ಗೊಂಬೆೆಗಳೂ ಈ ಹಂತದಲ್ಲಿವೆ. ಈ ಹಂತದ ಅನಂತರ ಇಲ್ಲಿ ಯಾರೂ ನೆಲೆಸಿದಂತೆ ಕಾಣುವುದಿಲ್ಲ. 30ಸೆಂಮೀ ನಷ್ಟು ಕಪ್ಪು ಮಣ್ಣಿನ ಬರಡು ಪದರ ಇದನ್ನು ಸೂಚಿಸುತ್ತದೆ. ಪ್ರ.ಶ.ಪು. 6ನೆಯ ಶತಮಾನದಲ್ಲಿ ಕಬ್ಬಿಣ ಲೋಹ ತಯಾರಿಕೆಯ ತಾಂತ್ರಿಕಜ್ಞಾನ ಮತ್ತು ಪರಿಣತಿ ಇದ್ದ ಜನರು ಇಲ್ಲಿ ನೆಲೆಸಿದರು. ಈ ಹಂತದಲ್ಲಿ ವಿವಿಧ ರೀತಿಯ ಕಬ್ಬಿಣದ ಸಾಮಾನುಗಳು ಹಾಗೂ ಆಯುಧಗಳು ದೊರೆತಿವೆ. ಔತ್ತರೇಯ ಮೆರುಗಿನ ಕಪ್ಪುಬಣ್ಣದ ಪಾತ್ರೆ ಹಾಗೂ ವರ್ಣಚಿತ್ರಿತ ಬೂದುಬಣ್ಣದ ಮಡಕೆಯ ಚೂರುಗಳು ದೊರೆತಿವೆ. ಜೊತೆಗೆ ಬೂದುಬಣ್ಣದ ಹಾಗೂ ಒರಟಾದ ಕಪ್ಪು-ಕೆಂಪು ಮಡಕೆಗಳು ಸಹ ಲಭ್ಯವಾಗಿವೆ. ಸುಟ್ಟಮಣ್ಣಿನ ಕಿವಿಯೋಲೆ, ಬಳೆ, ತಕಲಿ ಮತ್ತು ಗಾಜಿನ ಹಾಗೂ ಅರೆ ಅಮೂಲ್ಯ ಹರಳಿನ ಮಣಿಗಳು ದೊರೆತಿವೆ. ಇದರ ಮುಂದಿನ ಹಂತದಲ್ಲಿ ಶುಂಗ, ಕುಷಾಣ ಹಾಗೂ ಗುಪ್ತ ಕಾಲದ ಕೆಂಪು ಲೇಪನ ಮಾಡಿದ ಮಣ್ಪಾತ್ರೆ ದೊರೆತಿವೆ. ಕೆಂಪುಮಣ್ಣಿನ ಬಟ್ಟಲುಗಳು, ಸುಟ್ಟಮಣ್ಣಿನ ತಕಲಿ, ಕಿವಿಯೋಲೆ, ಆಟಿಕೆಯ ಎತ್ತಿನ ಬಂಡಿಯ ಚೌಕಟ್ಟು ಮತ್ತು ಶಂಖದ ಬಳೆಗಳು ಈ ಕಾಲದ ಇತರ ಅವಶೇಷಗಳು.	(ಪಿ.ಸಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ